Letter Writing in Kannada: ಪರೀಕ್ಷೆಗಳು ಹತ್ತಿರ ಬಂದರೆ ಸಾಕು ಎಲ್ಲಾ ವಿದ್ಯಾರ್ಥಿಗಳು ಕನ್ನಡ ಪತ್ರಲೇಖನ ಬರೆಯುವುದು ಹೇಗೆ? ಪತ್ರಲೇಖನ ಬರೆಯಬೇಕಾದರೆ ಯಾವ ಹಂತವನ್ನು ಪಾಲಿಸಬೇಕು? ಎನ್ನುವ ಮಾಹಿತಿಗಳನ್ನು ಮೊಬೈಲ್ ಗಳಲ್ಲಿ ಸರ್ಚ್ ಮಾಡುತ್ತಾರೆ.
Letter Writing in Kannada
ಆದರೆ ಸರ್ಚ್ ಮಾಡಿದಾಗ ಬರುವ ಈ ಎಲ್ಲಾ ಪತ್ರಲೇಖನಗಳು ಸರಿಯಾದ ರೂಪದಲ್ಲಿರುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ನೆರೆವಾಗುವ ರೀತಿಯಲ್ಲಿ ಪತ್ರಲೇಖನ ಬರೆಯುವಾಗ ಪಾಲಿಸಬೇಕಾದ ಕ್ರಮಗಳನ್ನು ಈ ಒಂದು ಲೇಖನದಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ.
ಮೊದಲೆಲ್ಲಾ ಯಾವುದೇ ವ್ಯಕ್ತಿ ತಮ್ಮೆಲ್ಲಾ ವ್ಯವಹಾರಗಳ ಬಗೆಗಿನ ಮಾಹಿತಿ, ಮಾತು-ಕತೆಗಳು ಹಾಗೂ ಯಾವುದೇ ಸಂತೋಷ, ದುಃಖದ ವಿಚಾರವನ್ನು ತಿಳಿಸಲು ಪತ್ರವನ್ನು ಬರೆದು ಕಳುಹಿಸುತ್ತಿದ್ದರು. ಆಗ ಪತ್ರವೇ ಮುಖ್ಯ ಸಂವಹನ ಮಾಧ್ಯಮವಾಗಿತ್ತು.
ಆದರೆ, ಈಗಿನ ವಿಜ್ಞಾನ, ತಂತ್ರಜ್ಞಾನಗಳ ಪ್ರಗತಿಯ ಕಾಲದಲ್ಲಿ ಮೊಬೈಲ್, ಇಂಟರ್ನೆಟ್, ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲಾ ಮಾಹಿತಿಗಳು ಕೆಲವೇ ಕ್ಷಣಗಳಲ್ಲಿ ವಿನಿಮಯ ಗೊಳ್ಳುತ್ತದೆ. ಹಾಗಾಗಿ ಈಗಿನ ಕಾಲದ ಜನರಿಗೆ ಪತ್ರ ಬರೆಯಲು ಬೇಕಾಗುವ ಸಮಯ ಹಾಗೂ ಸಹನೆಗಳೆರಡೂ ಕಡಿಮೆಯಾಗಿದೆ. ಆದರೆ,ಪತ್ರಲೇಖನ ಈ ಆಧುನಿಕ ಜಗತ್ತಿನಲ್ಲಿ ಏಕೆ ಅಗತ್ಯ? ಎನ್ನುವ ಬಗ್ಗೆ ಮಾಹಿತಿ ಈ ಕೆಳಗಿನ ಹಂತದಲ್ಲಿ ನೀಡಲಾಗಿದೆ.
ಪತ್ರಲೇಖನ ಎಂದರೇನು?
ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತಮ್ಮ ವಿಚಾರ, ಮಾಹಿತಿ, ವಿನಂತಿ, ಸೂಚನೆಗಳನ್ನು ಹಾಗೂ ಭಾವನೆಗಳನ್ನು ಬರವಣಿಗೆಯ ಮೂಲಕ ಹಂಚಿಕೊಳ್ಳುವ ಇಲ್ಲವೇ ತಿಳಿಸುವ ಪ್ರಕ್ರಿಯೆಯನ್ನು ‘ಪತ್ರಲೇಖನ’ ಎನ್ನುತ್ತಾರೆ.
ಪತ್ರಲೇಖನ ಏಕೆ ಅಗತ್ಯ?
ತಂತ್ರಜ್ಞಾನದ ಪ್ರಗತಿಯಿಂದಾಗಿ ಪತ್ರವನ್ನು ಬರೆಯುವವರ ಸಂಖ್ಯೆ ಕಡಿಮೆಯಾಗಿದ್ದರೂ ಕೂಡ ಪತ್ರಲೇಖನದ ಅಗತ್ಯತೆ ಇನ್ನು ಕಡಿಮೆಯಾಗಿಲ್ಲ. ಇದರಿಂದಾಗಿ ಪತ್ರಲೇಖನಕ್ಕೆ ಇನ್ನೂ ಕೂಡ ತನ್ನದೇ ಆದ ಮಹತ್ವವಿದೆ.
ಯಾವುದೇ ರೀತಿಯ ದೂರನ್ನು ಸಲ್ಲಿಸಬೇಕಾದರೆ, ಯಾವುದೇ ವಿನಂತಿ ಹಾಗೂ ಸೂಚನೆಗಳನ್ನು ತಿಳಿಸಬೇಕಾದರೆ ಪತ್ರದ ಮೂಲಕ ತಿಳಿಸುವುದು ಅಗತ್ಯವಾಗಿದೆ.
ಅಲ್ಲದೆ, ಸರ್ಕಾರಿ ಕೆಲಸಗಳಿಗೆ, ಅಧಿಕೃತ ವ್ಯವಹಾರವನ್ನು ಮಾಡಬೇಕಾದರೆ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷಾ ದೃಷ್ಟಿಯಲ್ಲಿ ಪತ್ರಲೇಖನ ಇನ್ನು ಅಗತ್ಯವಾಗಿದೆ. ಜೊತೆಗೆ, ಪತ್ರಲೇಖನವು ವ್ಯಕ್ತಿಯ ಭಾಷಾ ಸಾಮರ್ಥ್ಯ, ಅಭಿವ್ಯಕ್ತಿ ಕೌಶಲ್ಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ, ಆಧುನಿಕ ಯುಗದಲ್ಲಿ ಪತ್ರವನ್ನು ಬರೆಯುವುದನ್ನು ಕಲಿಯುವುದು ಬಹಳ ಮುಖ್ಯವಾಗಿದೆ.
ಪತ್ರಲೇಖನದ ವಿಧಗಳು:
ಪತ್ರಲೇಖನವು ಔಪಚಾರಿಕ ಪತ್ರ ಹಾಗೂ ಅನೌಪಚಾರಿಕ ಪತ್ರ ಎಂಬ ಎರಡು ವಿಧಗಳಿವೆ. ಅವುಗಳನ್ನು ಈ ಕೆಳಗೆ ವಿವರಿಸಲಾಗಿದೆ,
- ಔಪಚಾರಿಕ ಪತ್ರ:
ಸರ್ಕಾರಿ ಕಚೇರಿಗಳಿಗೆ, ಶಾಲಾ-ಕಾಲೇಜುಗಳಿಗೆ, ಅಪರಿಚಿತ ವ್ಯಕ್ತಿಗಳಿಗೆ, ಸಂಘ-ಸಂಸ್ಥೆಗಳಿಗೆ ವ್ಯವಹಾರದ ಉದ್ದೇಶದಿಂದ ಬರೆಯುವ ಪಾತ್ರವನ್ನು ‘ಔಪಚಾರಿಕ ಪತ್ರ‘ ಎಂದು ಕರೆಯುತ್ತಾರೆ.
- ಅನೌಪಚಾರಿಕ ಪತ್ರ:
ತಂದೆ-ತಾಯಿ, ಅಕ್ಕ- ತಂಗಿ, ಅಣ್ಣ-ತಮ್ಮ, ಸ್ನೇಹಿತರು, ಬಂಧುಗಳು ಹಾಗೂ ಹತ್ತಿರದ ಸಂಬಂಧಿಗಳಿಗೆ ಬರೆಯುವ ಪತ್ರವನ್ನು ‘ಅನೌಪಚಾರಿಕ ಪತ್ರ‘ ಎಂದು ಕರೆಯುತ್ತಾರೆ.
ಪತ್ರಲೇಖನದ ಲಕ್ಷಣಗಳು:
- ಸಂಕ್ಷಿಪ್ತತೆ:
ವ್ಯವಹಾರಿಕ ಪತ್ರಗಳಲ್ಲಿ ಅನಗತ್ಯ ವಿಷಯಗಳನ್ನು ಬಿಟ್ಟು ತಲುಪಿಸಬೇಕಾದ ವಿಷಯಗಳನ್ನು ಅಚ್ಚುಕಟ್ಟಾಗಿ ಬರೆಯುವುದು.
- ಸರಳ ಮತ್ತು ಸ್ಪಷ್ಟತೆ:
ಪತ್ರದಲ್ಲಿ ಬರೆಯುವ ಭಾಷೆ ಸರಳವಾಗಿದ್ದು, ಓದುಗರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿರಬೇಕು.
- ವಿನಯ ಮತ್ತು ನಮ್ರತೆ:
ಪತ್ರ ಬರೆಯುವವರು ತಮಗಿಂತ ಹಿರಿಯರು ಹಾಗೂ ಅಧಿಕಾರಿಗಳಿಗೆ ಗೌರವ ಸೂಚಕ ಪದಗಳನ್ನು ಬಳಸಿ ಪಾತ್ರವನು ಬರೆಯಬೇಕು. ಅವಿನಯ ಪದಗಳನ್ನು ಬಳಸಬಾರದು.
- ನಿಖರತೆ:
ಪತ್ರ ಬರೆಯುವವರು ಪತ್ರದಲ್ಲಿ ಯಾವುದೇ ತಪ್ಪು ಮಾಹಿತಿಯನ್ನು ನೀಡದೆ, ಪತ್ರದ ಪ್ರತಿಯೊಂದು ಮಾಹಿತಿಯು ಸತ್ಯವಾಗಿರಬೇಕು.
ಔಪಚಾರಿಕ ಪತ್ರಕ್ಕೆ ಉದಾಹರಣೆ:
“ಎರಡು ದಿನಗಳ ಕಾಲ ರಜೆ ಕೋರಿ ಮುಖ್ಯ ಶಿಕ್ಷಕರಿಗೆ ಪತ್ರ ಬರೆಯುವುದು”.
ಇಂದ,
ಕಿರಣ
ಹತ್ತನೇ ತರಗತಿ, ‘ಎ’ ವಿಭಾಗ
ಸರ್ಕಾರಿ ಪ್ರೌಢ ಶಾಲೆ, ಹಾಸನ
ಇವರಿಗೆ, ದಿನಾಂಕ: 27 ಜನವರಿ 2024
ಮುಖ್ಯ ಶಿಕ್ಷಕರು
ಸರ್ಕಾರಿ ಪ್ರೌಢ ಶಾಲೆ, ಹಾಸನ
ಮಾನ್ಯರೇ,
ವಿಷಯ: ಎರಡು ದಿನಗಳ ರಜೆ ಕೋರಿ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಅಣ್ಣನ ಮದುವೆಯು ದಿನಾಂಕ 28 ಜನವರಿ 2025 ರಿಂದ 30 ಜನವರಿ 2025 ರ ವರೆಗೆ ಹಾಸನದಲ್ಲಿ ನಡೆಯಲಿದ್ದು, ನಾನು ಕೂಡ ಭಾಗಿಯಾಗಬೇಕಿರುವುದರಿಂದ, ಎರಡು ದಿನಗಳು ಶಾಲೆಗೆ ಬರಲು ಸಾಧ್ಯವಾಗುವುದಿಲ್ಲ. ದಯವಿಟ್ಟು ನನಗೆ ಎರಡು ದಿನಗಳ ರಜೆಯನ್ನು ನೀಡಬೇಕಾಗಿ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಧನ್ಯವಾದಗಳೊಂದಿಗೆ,
ದಿನಾಂಕ: 27 ಜನವರಿ 2025 ಇಂತಿ ತಮ್ಮ ವಿಧೇಯ ವಿದ್ಯಾರ್ಥಿ,
ಸ್ಥಳ: ಹಾಸನ ಅ ಬ ಕ
ಅನೌಪಚಾರಿಕ ಪತ್ರಕ್ಕೆ ಉದಾಹರಣೆ:
“ಊರಿನ ಹಬ್ಬಕ್ಕೆ ಆಹ್ವಾನಿಸಲು ಗೆಳೆಯನಿಗೆ ಪತ್ರ”
ಮೋಹನ
#876, ಲಕ್ಷ್ಮಿ ನಿವಾಸ
ಗಾಂಧಿ ನಗರ, ಧಾರವಾಡ
ದಿನಾಂಕ: 20 ಡಿಸೆಂಬರ್ 2025
ಪ್ರೀತಿಯ ಗೆಳೆಯ ವರುಣ್,
ನಾನು ಇಲ್ಲಿ ಕ್ಷೇಮವಾಗಿದ್ದೇನೆ, ನೀನು ಹಾಗೂ ನಿನ್ನ ಕುಟುಂಬದವರು ಅಲ್ಲಿ ಕ್ಷೇಮವಾಗಿದ್ದೀರಾ ಎಂದು ನಾನು ಭಾವಿಸುತ್ತೇನೆ.
ನಾನು ಈ ಪತ್ರ ಬರೆಯಲು ಮುಖ್ಯ ಕಾರಣ, ನಮ್ಮ ಊರಿನಲ್ಲಿ 20 ಜನವರಿ 2026 ರಿಂದ ಜಾತ್ರಾ ಮಹೋತ್ಸವ ನಡೆಯಲಿದೆ. ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ನಮ್ಮ ಮನೆಯಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಕಳೆದ ವರ್ಷ ನೀನು ನಮ್ಮ ಮನೆಯ ಕಾರ್ಯಕ್ರಮಕ್ಕೆ ಭಾಗಿಯಾಗಲು ಆಗಲಿಲ್ಲ. ಆದರೆ, ಈ ವರ್ಷ ಖಂಡಿತವಾಗಿಯೂ ಬರಬೇಕು. ನಾವೆಲ್ಲರೂ ಸೇರಿ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರೆಣೆ ಮಾಡೋಣ.
ನಿನ್ನ ಮಾತ-ಪಿತರಿಗೆ ನನ್ನ ಪ್ರಣಾಮವನ್ನು ತಿಳಿಸು. ನಿನ್ನ ಬರುವಿಕೆಗಾಗಿ ನಾನು ಕಾಯುತ್ತಿರುತ್ತೇನೆ ಹಾಗೂ ನಿನ್ನನ್ನು ಭೇಟಿ ಮಾಡಲು ಕಾತುರನಾಗಿದ್ದೇನೆ.
ನಮಸ್ಕಾರಗಳೊಂದಿಗೆ,
ಇಂತಿ ನಿನ್ನ ಪ್ರೀತಿಯ ಗೆಳೆಯ,
ಮೋಹನ
ವಿಳಾಸ
ಇವರಿಗೆ,
ವರುಣ್
568, 3ನೇ ಅಡ್ಡ ರಸ್ತೆ
ವಿಜಯನಗರ, ಮೈಸೂರು – 570017
ಮುಕ್ತಾಯದ ನುಡಿಗಳು:
ಪತ್ರಲೇಖನ ಈ ಆಧುನಿಕ ಜಗತ್ತಿನಲ್ಲೂ ಕೂಡ ಸಂವಹನದ ಮಹತ್ವದ ಸಾಧನ. ಹಾಗಾಗಿ ಪತ್ರವನ್ನು ಬೆರೆಯುವುದು ಬಹಳ ಮುಖ್ಯ. ಪತ್ರಲೇಖನ ಬರೆಯಬೇಕಾದರೆ ಹಲವಾರು ಹಂತಗಳನ್ನು ಪಾಲಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪತ್ರವನ್ನು ಬರೆಯಿರಿ ಎಂದು ಕೇಳಿದರೆ ಮೊದಲು ಔಪಚಾರಿಕ ಪತ್ರಾವೋ? ಅನೌಪಚಾರಿಕ ಪತ್ರವೋ? ಎಂದು ತಿಳಿದುಕೊಳ್ಳಿ. ಈ ಎರಡು ಪತ್ರಗಳನ್ನು ಬೇರೆ ಬೇರೆ ರೂಪದಲ್ಲಿ ಬರೆಯಬೇಕಾಗುತ್ತದೆ.
ಇತರೆ ಸರ್ಕಾರಿ ಹುದ್ದೆಗಳ ಲಿಂಕುಗಳು :-
- 10ನೇ ತರಗತಿ ಪಾಸ್ ರೈಲ್ವೆ ಜಾಬ್!!
- ರೂ ₹89,150 ವೇತನ । 162 ಅಸಿಸ್ಟೆಂಟ್ ಹುದ್ದೆಗಳು : ಇಂದೇ ಅರ್ಜಿಸಲ್ಲಿಸಿ!
- ರೂ 18,714/- ನರ್ಸಿಂಗ್ & ಮೆಡಿಕಲ್ ಹುದ್ದೆಗಳ ಭರ್ತಿಗೆ ಭರ್ಜರಿ ನೇಮಕಾತಿ! ಇಂದೇ ಅರ್ಜಿ ಸಲ್ಲಿಸಿ!
- ರೂ10,560/- ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೋರೇಟರೀಸ್ – ಕೊನೆ ದಿನಾಂಕ ನೋಡಿ!
- ರೂ 52650/- ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಂಡಳಿಯ ನಿಯಮಿತ ನೇಮಕಾತಿ!
- ಬರೋಬ್ಬರಿ ₹50,000/- : ವಿದ್ಯಾರ್ಥಿಗಳೆ ಇತ್ತ ಗಮನಿಸಿ! ಅರ್ಜಿ ಸಲ್ಲಿಸಲು ಇಲ್ಲಿದೆ ಸರಳ ವಿಧಾನ.!







